ಪಾಕಿಸ್ತಾನೀ ಆಕ್ರಮಣದ ವಿಷಮಪರಿಸ್ಥಿತಿಯಲ್ಲಿ ಕಾಶ್ಮೀರ ಭಾರತದಲ್ಲಿ ವಿಲೀನಕ್ಕೆ ಒಪ್ಪಿಕೊಂಡರೂ ಆನಂತರ ಆ ರಾಜ್ಯವನ್ನು ಇತರೆಲ್ಲಾ ರಾಜ್ಯಗಳಂತೆ ಒಕ್ಕೂಟದಲ್ಲಿ ಸಂಪೂರ್ಣವಾಗಿ ಒಂದಾಗಿಸುವ ಪ್ರಯತ್ನವನ್ನು ನಮ್ಮ ಸರಕಾರಗಳು ಮಾಡಲಿಲ್ಲ. ಅಲ್ಲದೇ ೩೭೦ನೇ ಅನುಚ್ಛೇದದ ಪ್ರಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಆ ರಾಜ್ಯ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡು ಬರುವಂತೆ ಮಾಡಲಾಗಿದೆ. ಕಾಶ್ಮೀರದ ಸಂಬಂಧದಲ್ಲಿ ನೆಹರೂ ಸರಕಾರ ತಪ್ಪಿನ ಮೇಲೆ ತಪ್ಪು ಎಸಗಿದೆ. ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಗೆ ದೂರು ಒಯ್ದದ್ದು ಮೊದಲ ತಪ್ಪು. ನೆಹರೂ ಅವರ ಪಶ್ಚಿಮ ವಿರೋಧೀ ನೀತಿಗಳಿಂದಾಗಿ ಬರೀ ಅಮೆರಿಕನ್ ಮಿತ್ರರಿಂದಲೇ ತುಂಬಿದ್ದ ಆಗಿನ ವಿಶ್ವಸಂಸ್ಥೆ ನಮ್ಮ ವಿರುದ್ಧವಾಗಿ ನಿಂತಿತು. ಅಮೆರಿಕಾ, ಬ್ರಿಟನ್ ಮುಂತಾದ ಪಶ್ಚಿಮದ ದೇಶಗಳು ಪಾಕಿಸ್ತಾನದ ಪರವಾಗಿ ದಾಳ ಉರುಳಿಸಿದವು. ವಾಸ್ತವವಾಗಿ ಕಾಶ್ಮೀರದಲ್ಲಿ ಸೈನಿಕ ಯುದ್ಧ ನಡೆಸುವುದಕ್ಕಿಂತಲೂ ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ಯುದ್ಧ ನಡೆಸುವುದು ಭಾರತಕ್ಕೆ ಹೆಚ್ಚು ಕಷ್ಟಕರವಾಗಿತ್ತು. ನಂತರ ಕಾಶ್ಮೀರದ ಮೂರನೆಯ ಒಂದು ಭಾಗ ಪಾಕಿಸ್ತಾನದ ಹಿಡಿತದಲ್ಲಿರುವಾಗಲೇ ವಿಶ್ವಸಂಸ್ಥೆಯ ನಿರ್ಣಯಗಳನ್ನು ಒಪ್ಪಿಕೊಂಡು ಯುದ್ಧವಿರಾಮ ಘೋಷಿಸಿದ್ದು ನೆಹರೂ ಮಾಡಿದ ಎರಡನೆಯ ತಪ್ಪು. ಇದರಿಂದಾಗಿ ಕಾಶ್ಮೀರದ ಮೂರನೆಯ ಒಂದು ಭಾಗ ಈಗಲೂ ಪಾಕಿಸ್ತಾನದ ಹಿಡಿತದಲ್ಲಿದೆ ಮತ್ತು ಪಾಕಿಸ್ತಾನ ಅಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ಈ ಕಾರಣಗಳಿಂದಾಗಿ ಕಾಶ್ಮೀರ ದಶಕಗಳಿಂದ ಅಶಾಂತಿಯಲ್ಲಿ ಬೇಯುತ್ತಿದೆ. ಅಲ್ಲಿ ಪಾಕಿಸ್ತಾನೀ ಪ್ರೇರಿತ ಭಯೊತ್ಪಾದನೆಯಿಂದಾಗಿ ಸಾವಿರಾರು ಜನರ ಪ್ರಾಣಹಾನಿಯಾಗುತ್ತಿದೆ ಹಾಗೂ ರಾಷ್ಟ್ರದ ಪ್ರಗತಿಗೆ ಅಗತ್ಯವಾಗಿದ್ದ ಬಿಲಿಯನ್‌ಗಟ್ಟಲೆ ಹಣ ವ್ಯರ್ಥವಾಗುತ್ತಿದೆ.
No comments:
Post a Comment